Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 6ನೇ ಏಪ್ರಿಲ್ 2021

 

ಪರಿವಿಡಿ :

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ನ್ಯಾಯಮಂಡಳಿ ಸುಧಾರಣೆಗಳ (ತರ್ಕಬದ್ಧಗೊಳಿಸುವಿಕೆ ಮತ್ತು ಸೇವೆಯ ಷರತ್ತುಗಳು) ಸುಗ್ರೀವಾಜ್ಞೆ, 2021.

2. ಇ 9 ಉಪಕ್ರಮ.

3. ಉಯಿಘರ್ಗಳು ಎಂದರೆ ಯಾರು?

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಅರಣ್ಯ ಬೆಂಕಿ / ಕಾಡ್ಗಿಚ್ಚು.

2. ಚೀನಾದ ಡಿಜಿಟಲ್ ಕರೆನ್ಸಿ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಚಿನಾಬ್ ಸೇತುವೆ: ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ.

2. ಲಾ ಪ್ರೌಸ (LA PEROUSE)

3. ಅಂತರರಾಷ್ಟ್ರೀಯ ವರ್ಚುವಲ್ ಚುನಾವಣಾ ಸಂದರ್ಶಕರ/ ವೀಕ್ಷಕರ ಕಾರ್ಯಕ್ರಮ (IVEP) 2021.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಶಾಸನಬದ್ಧ ನಿಯಂತ್ರಕ ಮತ್ತು ವಿವಿಧ ಅರೆ- ನ್ಯಾಯಿಕ ಸಂಸ್ಥೆಗಳು.

ನ್ಯಾಯಮಂಡಳಿ ಸುಧಾರಣೆಗಳ (ತರ್ಕಬದ್ಧಗೊಳಿಸುವಿಕೆ ಮತ್ತು ಸೇವೆಯ ಷರತ್ತುಗಳು) ಸುಗ್ರೀವಾಜ್ಞೆ, 2021:


(Tribunals Reforms (Rationalisation and Conditions of Service) Ordinance, 2021)

 ಸಂದರ್ಭ:

ಇತ್ತೀಚೆಗೆ, ‘ನ್ಯಾಯಮಂಡಳಿ ಸುಧಾರಣೆಗಳ (ತರ್ಕಬದ್ಧಗೊಳಿಸುವಿಕೆ ಮತ್ತು ಸೇವೆಯ ಷರತ್ತುಗಳು) ಸುಗ್ರೀವಾಜ್ಞೆ, 2021’ ಅನ್ನು ಭಾರತದ ರಾಷ್ಟ್ರಪತಿಗಳು ಘೋಷಿಸಿದ್ದಾರೆ.

ಮದ್ರಾಸ್ ಬಾರ್ ಅಸೋಸಿಯೇಷನ್ ​​ಪ್ರಕರಣ’ದಲ್ಲಿ ಕಳೆದ ವರ್ಷ ಸುಪ್ರೀಂ ಕೋರ್ಟ್ ನೀಡಿರುವ ಸೂಚನೆಗಳನ್ನು ಆಧರಿಸಿ ಈ ಬದಲಾವಣೆಗಳನ್ನು ಮಾಡಲಾಗಿದೆ.

ಪ್ರಮುಖ ಬದಲಾವಣೆಗಳು:

 •  ಸುಗ್ರೀವಾಜ್ಞೆಯ ಪ್ರಕಾರ, ಅಸ್ತಿತ್ವದಲ್ಲಿರುವ ಕೆಲವು ಮೇಲ್ಮನವಿ ನ್ಯಾಯಿಕ ಸಂಸ್ಥೆಗಳನ್ನು ವಿಸರ್ಜಿಸಲಾಗುವುದು, ಮತ್ತು ಅವುಗಳ ಕಾರ್ಯಗಳನ್ನು ಅಸ್ತಿತ್ವದಲ್ಲಿರುವ ಇತರ ನ್ಯಾಯಾಂಗ ಸಂಸ್ಥೆಗಳಿಗೆ ವರ್ಗಾಯಿಸಲು ಪ್ರಯತ್ನಿಸಲಾಗುತ್ತದೆ.
 • ಈ ಮೂಲಕ, ನ್ಯಾಯಮಂಡಳಿಯ ಸದಸ್ಯರ ಅರ್ಹತೆ, ನೇಮಕಾತಿ, ಅಧಿಕಾರಾವಧಿ, ಸಂಬಳ ಮತ್ತು ಭತ್ಯೆಗಳು, ರಾಜೀನಾಮೆ, ಉಚ್ಚಾಟನೆ ಮತ್ತು ಇತರ ಸೇವಾ ಪರಿಸ್ಥಿತಿಗಳಿಗೆ ಸಂಬಂಧಿಸಿದ ನಿಯಮಗಳನ್ನು ಮಾಡಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡಲಾಗಿದೆ.
 • ಇದರ ಅಡಿಯಲ್ಲಿ, ಶೋಧ ಮತ್ತು ಆಯ್ಕೆ ಸಮಿತಿಯ(Search-cum-selection committee) ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರವು ನ್ಯಾಯಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಲು ಅವಕಾಶ ಕಲ್ಪಿಸಲಾಗಿದೆ.
 • ಅದರ ನಿಬಂಧನೆಗಳ ಪ್ರಕಾರ, ಸಮಿತಿಯ ಅಧ್ಯಕ್ಷತೆಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಅಥವಾ ಅವರು ನಾಮನಿರ್ದೇಶನ ಮಾಡಿದ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ವಹಿಸಲಿದ್ದಾರೆ.
 • ಅಧಿಕಾರಾವಧಿ:

ನ್ಯಾಯಮಂಡಳಿಯ ಅಧ್ಯಕ್ಷರು 4 ವರ್ಷಗಳ ಅವಧಿಗೆ ಅಥವಾ ಅವರು 70 ವರ್ಷ ತುಂಬುವವರೆಗೆ, ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಅಧಿಕಾರದಲ್ಲಿರುತ್ತಾರೆ. ನ್ಯಾಯಮಂಡಳಿಯ ಇತರ ಸದಸ್ಯರು 4 ವರ್ಷ ಅಥವಾ 67 ವರ್ಷ ಪೂರ್ಣಗೊಳ್ಳುವವರೆಗೆ ಇಲ್ಲಿಯೂ ಕೂಡ ಯಾವುದು ಮೊದಲೋ ಅಲ್ಲಿಯವರೆಗೆ ಇವರು ತಮ್ಮ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಾರೆ.

 ಈ ಸುಗ್ರೀವಾಜ್ಞೆಯು ಈ ಕೆಳಗಿನ ನ್ಯಾಯಮಂಡಳಿಗಳು / ಮೇಲ್ಮನವಿ ಪ್ರಾಧಿಕಾರಗಳನ್ನು  ಹಣಕಾಸು ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡುತ್ತದೆ:

 • ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಕಾಯ್ದೆ, 1994 ರ ಅಡಿಯಲ್ಲಿ ಸ್ಥಾಪಿಸಲಾದ ‘ಏರ್ಪೋರ್ಟ್ ಮೇಲ್ಮನವಿ ನ್ಯಾಯಮಂಡಳಿ’.
 • ಟ್ರೇಡ್ ಮಾರ್ಕ್ಸ್ ಆಕ್ಟ್, 1999 ರ ಅಡಿಯಲ್ಲಿ ಮೇಲ್ಮನವಿ ಮಂಡಳಿ ಸ್ಥಾಪಿಸಲಾಗಿದೆ.
 • ಆದಾಯ ತೆರಿಗೆ ಕಾಯ್ದೆ, 1961 ರ ಅಡಿಯಲ್ಲಿ ಸ್ಥಾಪಿಸಲಾದ ಮುಂಗಡ ತೀರ್ಪಿನ ಪ್ರಾಧಿಕಾರ.
 • ಛಾಯಾಗ್ರಹಣ ಕಾಯ್ದೆ, 1952 ರ ಅಡಿಯಲ್ಲಿ ಸ್ಥಾಪಿಸಲಾದ ‘ಚಲನಚಿತ್ರ ಪ್ರಮಾಣೀಕರಣ ಮೇಲ್ಮನವಿ ನ್ಯಾಯಾಧೀಕರಣ’.

ನ್ಯಾಯಮಂಡಳಿ/ನ್ಯಾಯಾಧಿಕರಣಗಳು ಎಂದರೇನು?

ನ್ಯಾಯಾಧಿಕರಣವು ಅರೆ-ನ್ಯಾಯಾಂಗ ಸಂಸ್ಥೆಯಾಗಿದ್ದು, ಆಡಳಿತಾತ್ಮಕ ಅಥವಾ ತೆರಿಗೆ-ಸಂಬಂಧಿತ ವಿವಾದ ಗಳಂತಹ ಸಮಸ್ಯೆಗಳನ್ನು ಪರಿಹರಿಸಲು ಇವನ್ನು ಸ್ಥಾಪಿಸಲಾಗಿದೆ. ಇದು ವಿವಾದಗಳನ್ನು ನಿರ್ಣಯಿಸುವುದು, ವಾದಿ – ಪ್ರತಿವಾದಿ ಪಕ್ಷಗಳ ನಡುವೆ ಹಕ್ಕುಗಳನ್ನು ನಿರ್ಧರಿಸುವುದು, ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳುವುದು, ಅಸ್ತಿತ್ವದಲ್ಲಿರುವ ಆಡಳಿತಾತ್ಮಕ ನಿರ್ಧಾರವನ್ನು ಪರಿಶೀಲಿಸುವುದು ಮುಂತಾದ ಹಲವಾರು ಕಾರ್ಯಗಳನ್ನು ನಿರ್ವಹಿಸುತ್ತದೆ.

ಸಾಂವಿಧಾನಿಕ ನಿಬಂಧನೆಗಳು:

ಇವುಗಳು ಮೂಲತಃ ಸಂವಿಧಾನದ ಭಾಗವಾಗಿರಲಿಲ್ಲ.

ಸ್ವರ್ಣ ಸಿಂಗ್ ಸಮಿತಿಯ ಶಿಫಾರಸುಗಳಿಗೆ ಅನುಗುಣವಾಗಿ ಸಂವಿಧಾನದ 42 ನೇ ತಿದ್ದುಪಡಿ ಕಾಯ್ದೆಯು ಈ ನಿಬಂಧನೆಗಳನ್ನು ಪರಿಚಯಿಸಿತು.

ಈ ತಿದ್ದುಪಡಿಯು ಸಂವಿಧಾನಕ್ಕೆ ಭಾಗ XIV-A ಅನ್ನು ಸೇರಿಸಿತು, ಈ ಭಾಗವು ‘ನ್ಯಾಯಮಂಡಳಿಗಳೊಂದಿಗೆ’ ವ್ಯವಹರಿಸುತ್ತದೆ ಮತ್ತು ಸಂವಿಧಾನದ ಎರಡು ವಿಧಿಗಳನ್ನು ಒಳಗೊಂಡಿದೆ:

 • ಸಂವಿಧಾನದ 323 A ವಿಧಿಯು ಆಡಳಿತಾತ್ಮಕ ನ್ಯಾಯಮಂಡಳಿಗಳೊಂದಿಗೆ ವ್ಯವಹರಿಸುತ್ತದೆ. ಇವು, ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ವ್ಯಕ್ತಿಗಳ ನೇಮಕಾತಿ ಮತ್ತು ಸೇವಾ ಪರಿಸ್ಥಿತಿಗಳಿಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸುವ ಅರೆ-ನ್ಯಾಯಾಂಗ ಸಂಸ್ಥೆಗಳಾಗಿವೆ.
 • ಸಂವಿಧಾನದ 323 B ವಿಧಿಯು ತೆರಿಗೆ, ಕೈಗಾರಿಕಾ ಮತ್ತು ಕಾರ್ಮಿಕ, ವಿದೇಶಿ ವಿನಿಮಯ, ಆಮದು ಮತ್ತು ರಫ್ತು, ಭೂ ಸುಧಾರಣೆಗಳು, ಆಹಾರ, ನಗರ ಆಸ್ತಿಯ ಮೇಲಿನ ಮಿತಿ ನಿಗದಿಪಡಿಸುವುದು, ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಿಗೆ ಚುನಾವಣೆ, ಬಾಡಿಗೆ ಮತ್ತು ಬಾಡಿಗೆ ಹಕ್ಕುಗಳಂತಹ ಇತರ ವಿಷಯಗಳಿಗೆ ಸಂಬಂಧಿಸಿದಂತೆ ನ್ಯಾಯಮಂಡಳಿಯ ವ್ಯವಹರಿಸುತ್ತದೆ.

 

ವಿಷಯಗಳು: ಆರೋಗ್ಯ, ಶಿಕ್ಷಣ ಮತ್ತು ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದ ಸಾಮಾಜಿಕ ವಲಯ/ ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳು.

ಇ9 ಉಪಕ್ರಮ:


(E9 initiative)

 ಸಂದರ್ಭ:

‘ಇ 9 ಉಪಕ್ರಮದ’ ಕುರಿತು ‘ಇ 9 ದೇಶಗಳ’ ಶಿಕ್ಷಣ ಸಚಿವರ ಸಮಾಲೋಚನಾ ಸಭೆ ನಾಳೆ ನಡೆಯಲಿದೆ.

ಈ ಸಮಾಲೋಚನಾ ಸಭೆಯು ಸಮಾಜದ ಅಂಚಿನಲ್ಲಿರುವ ಅಂದರೆ, ದೀನದಲಿತ ಮಕ್ಕಳು ಮತ್ತು ಯುವಕರನ್ನು, ವಿಶೇಷವಾಗಿ ಬಾಲಿಕೆಯರನ್ನು ಗುರಿಯಾಗಿಸಿಕೊಂಡು ಡಿಜಿಟಲ್ ಕಲಿಕೆ ಮತ್ತು ಕೌಶಲ್ಯಗಳ ಕುರಿತು ಉಪಕ್ರಮಗಳನ್ನು ನಿರ್ಮಿಸುವ ಮೂರು ಹಂತದ ಪ್ರಕ್ರಿಯೆಯಲ್ಲಿ ಮೊದಲನೆಯದಾಗಿದೆ.

ಇ 9 ಉಪಕ್ರಮ’ ಎಂದರೇನು?

2020 ರಲ್ಲಿ ನಡೆದ ‘ಜಾಗತಿಕ ಶಿಕ್ಷಣ ಸಮ್ಮೇಳನ’ದ ಮೂರು ಆದ್ಯತೆಗಳಲ್ಲಿ ತ್ವರಿತ ಬದಲಾವಣೆಗಳ ಸುಧಾರಣೆಯನ್ನು ವೇಗಗೊಳಿಸಲು (i) ಶಿಕ್ಷಕರ ಸಹಕಾರ (ii) ಕೌಶಲ್ಯಗಳಲ್ಲಿ ಹೂಡಿಕೆ ಮತ್ತು (iii) ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡುವುದು ಮತ್ತು ‘ಸುಸ್ಥಿರ ಅಭಿವೃದ್ಧಿ ಗುರಿ -4’ ಕಾರ್ಯಸೂಚಿಯನ್ನು ಮತ್ತಷ್ಟು ಹೆಚ್ಚಿಸಲು  ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ,

ಭಾಗವಹಿಸುವವರು:

ವಿಶ್ವಸಂಸ್ಥೆಯ ನೇತೃತ್ವದ ಈ ಉಪಕ್ರಮದಡಿಯಲ್ಲಿ ಇ 9 ದೇಶಗಳಲ್ಲಿ ಬಾಂಗ್ಲಾದೇಶ, ಬ್ರೆಜಿಲ್, ಚೀನಾ, ಈಜಿಪ್ಟ್, ಭಾರತ, ಇಂಡೋನೇಷ್ಯಾ, ಮೆಕ್ಸಿಕೊ, ನೈಜೀರಿಯಾ ಮತ್ತು ಪಾಕಿಸ್ತಾನ ಸೇರಿವೆ.

 ಪ್ರಯೋಜನಗಳು:

ಇ 9 ದೇಶಗಳ ನಡುವೆ ಸ್ಥಾಪಿಸಲಾದ ಸಹಭಾಗಿತ್ವದ ಮೇಲೆ ನಿರ್ಮಿಸಲಾದ ಈ ಉಪಕ್ರಮವು ಈ ಒಂಬತ್ತು ದೇಶಗಳಿಗೆ ಈ ಜಾಗತಿಕ ಉಪಕ್ರಮದಿಂದ ಲಾಭ ಪಡೆಯಲು ಮತ್ತು ಸುಸ್ಥಿರ ಅಭಿವೃದ್ಧಿ ಗುರಿ -4 ಗುಣಮಟ್ಟದ ಶಿಕ್ಷಣವನ್ನು ಸಾಧಿಸುವತ್ತ ಡಿಜಿಟಲ್ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ಪ್ರಗತಿಯನ್ನು ವೇಗಗೊಳಿಸಲು ಒಂದು ಅವಕಾಶವಾಗಿದೆ.

 

ವಿಷಯಗಳು: ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

ಉಯಿಘರ್ ಗಳು ಯಾರು?


(Who are Uighurs?)

ಸಂದರ್ಭ:

ಇತ್ತೀಚೆಗೆ, ಜಪಾನಿನ ವಿದೇಶಾಂಗ ಸಚಿವ ‘ತೋಷಿಮಿಟ್ಸು ಮೊಟೆಗಿ’(Toshimitsu Motegi)  ಅವರು,   ಚೀನಾದ ಉಯಿಘರ್ ಅಲ್ಪಸಂಖ್ಯಾತರ ಮಾನವ ಹಕ್ಕುಗಳ ಪರಿಸ್ಥಿತಿಯ ಬಗ್ಗೆ ತಮ್ಮ ಚೀನಾದ ಸಹವರ್ತಿಯೊಂದಿಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಉಯಿಘರ್ ಗಳು ಯಾರು?

 • ಉಯಿಘರ್ ಗಳು ಚೀನಾದ ವಾಯುವ್ಯ ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ವಾಸಿಸುವ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ. ಅವರು ಕ್ಸಿನ್‌ಜಿಯಾಂಗ್ ಪ್ರಾಂತ್ಯದ ಜನಸಂಖ್ಯೆಯ ಸುಮಾರು 40 ಪ್ರತಿಶತದಷ್ಟಿದ್ದಾರೆ.
 • ಚೀನಾಕ್ಕಿಂತ ಟರ್ಕಿ ಮತ್ತು ಮಧ್ಯ ಏಷ್ಯಾದ ಇತರ ದೇಶಗಳೊಂದಿಗೆ ಉಯಿಘರ್ ಗಳು ಹೆಚ್ಚು ನಿಕಟವಾದ ಜನಾಂಗೀಯ ಸಂಬಂಧವನ್ನು ಹೊಂದಿದ್ದಾರೆ.

ಚೀನಾ ಉಯಿಘರ್ ಗಳನ್ನು ಏಕೆ ಗುರಿಯಾಗಿಸಿಕೊಂಡಿದೆ?

ಕ್ಸಿನ್‌ಜಿಯಾಂಗ್ ತಾಂತ್ರಿಕವಾಗಿ ಚೀನಾದ ಸ್ವಾಯತ್ತ ಪ್ರದೇಶವಾಗಿದೆ. ಕ್ಸಿನ್‌ಜಿಯಾಂಗ್ ಚೀನಾದ ಅತಿದೊಡ್ಡ ಪ್ರದೇಶವಾಗಿದೆ ಮತ್ತು ಖನಿಜಗಳಿಂದ ಸಮೃದ್ಧವಾಗಿದೆ, ಈ ಪ್ರಾಂತ್ಯವು ಭಾರತ, ಪಾಕಿಸ್ತಾನ, ರಷ್ಯಾ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಎಂಟು ದೇಶಗಳೊಂದಿಗೆ ಗಡಿ ಹಂಚಿಕೊಡಿದೆ.

 • ಕಳೆದ ಕೆಲವು ದಶಕಗಳಲ್ಲಿ, ಕ್ಸಿನ್‌ಜಿಯಾಂಗ್ ಪ್ರಾಂತ್ಯವು ಆರ್ಥಿಕವಾಗಿ ಸಮೃದ್ಧವಾಗಿದೆ, ಹೆಚ್ಚಿನ ಸಂಖ್ಯೆಯ ‘ಹಾನ್ ಚೈನೀಸ್’ (Han Chinese) ಸಮುದಾಯವು ಈ ಪ್ರದೇಶದಲ್ಲಿ ನೆಲೆಸಿದೆ ಮತ್ತು ಉತ್ತಮ ಉದ್ಯೋಗಗಳನ್ನು ಹೊಂದಿದೆ. ಹಾನ್ ಚೈನೀಸ್ ಉಯಿಘರ್ ಗಳಿಗೆ ಜೀವನೋಪಾಯ ಮತ್ತು ಗುರುತಿನ ಬಿಕ್ಕಟ್ಟನ್ನು ಸೃಷ್ಟಿಸಿದ್ದಾರೆ.
 • ಈ ಕಾರಣಗಳಿಗಾಗಿ, ವಿರಳ ಹಿಂಸಾಚಾರ ಸಂಭವಿಸಿತು ಮತ್ತು 2009 ರಲ್ಲಿ, ಕ್ಸಿನ್‌ಜಿಯಾಂಗ್ ಪ್ರಾಂತ್ಯದ ರಾಜಧಾನಿ ಉರುಮ್ಕಿಯಲ್ಲಿ 200 ಜನರು ಹೆಚ್ಚಾಗಿ ಹಾನ್ ಚೈನೀಸ್ ಕೊಲ್ಲಲ್ಪಟ್ಟರು, ಅಂದಿನಿಂದ ಇನ್ನೂ ಅನೇಕ ಹಿಂಸಾತ್ಮಕ ಘಟನೆಗಳು ನಡೆದಿವೆ.
 • ಬೀಜಿಂಗ್, ಈ ಸಮುದಾಯವು ಸ್ವತಂತ್ರ ರಾಜ್ಯವನ್ನು ಸ್ಥಾಪಿಸಲು ಬಯಸಿದೆ ಮತ್ತು ಟರ್ಕಿ ಮತ್ತು ಇತರ ಮಧ್ಯ ಏಷ್ಯಾದ ದೇಶಗಳೊಂದಿಗಿನ ಉಯ್ಘರ್‌ಗಳ ಸಾಂಸ್ಕೃತಿಕ ಸಂಪರ್ಕದಿಂದಾಗಿ, ಪಾಕಿಸ್ತಾನದಂತಹ ಸ್ಥಳಗಳಿಂದ ಕಾರ್ಯನಿರ್ವಹಿಸುತ್ತಿರುವ ಉಗ್ರಗಾಮಿ ಅಂಶಗಳು ಕ್ಸಿನ್‌ಜಿಯಾಂಗ್‌ನಲ್ಲಿನ ಪ್ರತ್ಯೇಕತಾವಾದಿ ಚಳುವಳಿಯನ್ನು ಬೆಂಬಲಿಸ ಬಹುದೆಂದು ಭಯಪಡುತ್ತಿದೆ.
 • ಆದ್ದರಿಂದ, ಇಡೀ ಸಮುದಾಯವನ್ನು ಅನುಮಾನಾಸ್ಪದವೆಂದು ಪರಿಗಣಿಸಲು ಮತ್ತು ಉಯಿಘರ್ ಗಳ ಪ್ರತ್ಯೇಕ ಗುರುತನ್ನು ತೊಡೆದುಹಾಕಲು ವ್ಯವಸ್ಥಿತ ಯೋಜನೆಯನ್ನು ಪ್ರಾರಂಭಿಸುವುದು ಚೀನಾದ ನೀತಿಯಾಗಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ವಿಪತ್ತು ನಿರ್ವಹಣೆ.

ವಸಂತಕಾಲದಲ್ಲಿ ಕಾಡ್ಗಿಚ್ಚು ಮತ್ತು ಈ ವರ್ಷದುದ್ದಕ್ಕೂ ಅದರ ಆವರ್ತನ:

(Forest fires in the spring and their frequency throughout this year)

ಸಂದರ್ಭ:

2021 ರ ಆರಂಭದಿಂದಲೂ ವನ್ಯಜೀವಿ ಅಭಯಾರಣ್ಯಗಳನ್ನು ಒಳಗೊಂಡಂತೆ ಹಿಮಾಚಲ ಪ್ರದೇಶ, ನಾಗಾಲ್ಯಾಂಡ್-ಮಣಿಪುರ ಗಡಿ ಪ್ರದೇಶಗಳು, ಒಡಿಶಾ, ಮಧ್ಯಪ್ರದೇಶ ಮತ್ತು ಗುಜರಾತ್ ಗಳಲ್ಲಿ  ಸರಣಿ ‘ಕಾಡ್ಗಿಚ್ಚಿನ ಪ್ರಕರಣಗಳು’ ಕಂಡುಬಂದಿವೆ.

ಸಾಮಾನ್ಯವಾಗಿ, ಏಪ್ರಿಲ್-ಮೇ ಅವಧಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ‘ಕಾಡ್ಗಿಚ್ಚು’ ಘಟನೆಗಳು ಸಂಭವಿಸುತ್ತವೆ.ಆದರೆ, ಇಲ್ಲಿಯವರೆಗೆ, ಉತ್ತರಾಖಂಡದಲ್ಲಿ ವನಾಗ್ನಿ’/ಕಾಡ್ಗಿಚ್ಚು ಘಟನೆಗಳು ಸಾಮಾನ್ಯಕ್ಕಿಂತ ಹೆಚ್ಚಾಗಿ ಸಂಭವಿಸುತ್ತಿದ್ದು, ಚಳಿಗಾಲದ ಸಮಯದಲ್ಲಿಯೂ ರಾಜ್ಯದ ಕಾಡುಗಳಲ್ಲಿ ಈ ಕಾಡ್ಗಿಚ್ಚು ಘಟನೆಗಳು ಕಂಡುಬಂದಿವೆ. ದುರ್ಬಲ ಮಾನ್ಸೂನ್ ನಿಂದಾಗಿ ಮಳೆಗಾಲದಲ್ಲಿ ಕಡಿಮೆ ಮಳೆಯಾಗಿರುವುದರಿಂದ ‘ಮಣ್ಣಿನಲ್ಲಿನ ಶುಷ್ಕತೆ’ ಯು ಇದಕ್ಕೆ ಒಂದು ಕಾರಣವಾಗಿ ನೋಡಲಾಗುತ್ತಿದೆ.

ಭಾರತದ ಅರಣ್ಯಗಳು ಕಾಡ್ಗಿಚ್ಚಿಗೆ ಗುರಿಯಾಗುವ ಸಂಭವನೀಯತೆ?

 • ಹೆಚ್ಚು ಅಪಾಯಕ್ಕೆ ಒಳಗಾಗಬಲ್ಲ ಪ್ರದೇಶಗಳು (Most vulnerable areas): ಈಶಾನ್ಯ ಮತ್ತು ಮಧ್ಯ ಭಾರತದ ಪ್ರದೇಶಗಳ ಕಾಡುಗಳು ಕಾಡ್ಗಿಚ್ಚಿಗೆ ಹೆಚ್ಚು ಗುರಿಯಾಗುವ ಮತ್ತು ದುರ್ಬಲ ಪ್ರದೇಶಗಳಾಗಿವೆ.
 • ಅತಿ ಹೆಚ್ಚು ಪೀಡಿತ’ ಪ್ರದೇಶಗಳು (Extremely prone areas): ಅಸ್ಸಾಂ, ಮಿಜೋರಾಂ ಮತ್ತು ತ್ರಿಪುರದ ಕಾಡುಗಳನ್ನು ಕಾಡ್ಗಿಚ್ಚಿನಿಂದಾಗಿ ‘ಹೆಚ್ಚು ಪೀಡಿತ ಪ್ರದೇಶಗಳು’ ಎಂದು ಗುರುತಿಸಲಾಗಿದೆ.
 • ಅತಿ ಹೆಚ್ಚು ಪೀಡಿತ’ ವರ್ಗ (‘Very highly prone’ category) : ವಿಶಾಲ ಅರಣ್ಯ ಪ್ರದೇಶಗಳನ್ನು ಹೊಂದಿರುವ ರಾಜ್ಯಗಳು, ಉದಾ., ಆಂಧ್ರಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ, ಮಹಾರಾಷ್ಟ್ರ, ಬಿಹಾರ ಮತ್ತು ಉತ್ತರ ಪ್ರದೇಶವನ್ನು ‘ಅತಿ ಹೆಚ್ಚು ಪೀಡಿತ’ ವರ್ಗವೆಂದು ಪರಿಗಣಿಸಲಾಗಿದೆ.
 • ವಿಪರೀತ ಪೀಡಿತ’ ವರ್ಗ(‘Extremely prone’ category): ಪಶ್ಚಿಮ ಮಹಾರಾಷ್ಟ್ರ, ದಕ್ಷಿಣ ಛತ್ತೀಸಗಡ ಮತ್ತು ಒಡಿಶಾದ ಕೇಂದ್ರ ಪ್ರದೇಶಗಳು ಸೇರಿದಂತೆ ತೆಲಂಗಾಣ ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳು ‘ಅತ್ಯಂತ ಹೆಚ್ಚು ಕಾಡ್ಗಿಚ್ಚು ಪೀಡಿತ’ ಹಾಟ್‌ಸ್ಪಾಟ್‌ಗಳಾಗಿ ಬದಲಾಗುತ್ತಿವೆ.

ದೇಶದಲ್ಲಿ, ‘ಹೆಚ್ಚು ಪೀಡಿತ’ ಮತ್ತು ‘ಮಧ್ಯಮ ಪೀಡಿತ’ ವರ್ಗಗಳ ಅಡಿಯಲ್ಲಿರುವ ಅರಣ್ಯಗಳು , ಒಟ್ಟು ಅರಣ್ಯ ವ್ಯಾಪ್ತಿಯ ಸುಮಾರು 26.2% ರಷ್ಟು ಅಂದರೆ ಇದು 1,72,374 ಚದರ ಕಿ.ಮೀ.ನಷ್ಟು ವ್ಯಾಪ್ತಿಯನ್ನು ಹೊಂದಿವೆ.

 ಕಾಡ್ಗಿಚ್ಚು ಸಂಭವಿಸಲು ಇರುವ ಕಾರಣಗಳು?

 • ಮಣ್ಣಿನಲ್ಲಿ ತೇವಾಂಶದ ಕೊರತೆ.
 • ಮಳೆಯ ಕೊರತೆ.
 • ನೈಸರ್ಗಿಕ ಕಾರಣಗಳು; ಉದಾ, ಮಿಂಚು, ಹೆಚ್ಚಿದ ವಾತಾವರಣದ ತಾಪಮಾನ ಮತ್ತು ಕಡಿಮೆ ಆರ್ದ್ರತೆ
 • ಮಾನವ ನಿರ್ಮಿತ ಕಾರಣಗಳಾದ ಜ್ವಾಲೆ, ಸಿಗರೇಟ್, ವಿದ್ಯುತ್ ಸ್ಪಾರ್ಕ್ ಅಥವಾ ಯಾವುದೇ ರೀತಿಯ ದಹನವೂ ಕಾಡಿನಲ್ಲಿ ಬೆಂಕಿಗೆ ಕಾರಣವಾಗಿದೆ.
 • ಹೆಚ್ಚುತ್ತಿರುವ ಮನುಷ್ಯ ಮತ್ತು ಜಾನುವಾರುಗಳ ಜನಸಂಖ್ಯೆ ಮತ್ತು ದನಗಳ ಮೇಯಿಸುವಿಕೆ, ಸ್ಥಳಾಂತರ ವ್ಯವಸಾಯ ಮತ್ತು ವೈಯಕ್ತಿಕವಾಗಿ ಮತ್ತು ಸಮುದಾಯಗಳಿಂದ ಅರಣ್ಯ ಉತ್ಪನ್ನಗಳಿಗೆ ಹೆಚ್ಚಿದ ಬೇಡಿಕೆಯಿಂದ ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ.

ಯಂತ್ರಿಸುವುದು ಕಷ್ಟಸಾಧ್ಯ ಏಕೆ?

 •  ನಿರ್ದಿಷ್ಟ ಕಾಡು ಇರುವ ಪ್ರದೇಶ ಮತ್ತು ಅದನ್ನು ಪ್ರವೇಶಿಸಿ ಅಗ್ನಿಶಾಮಕ ಪ್ರಯತ್ನಗಳನ್ನು ಪ್ರಾರಂಭಿಸಲು ಅಡೆತಡೆಗಳನ್ನು ಸೃಷ್ಟಿಸುತ್ತದೆ.
 • ಬೇಡಿಕೆಯ ಗರಿಷ್ಠ ಅವಧಿಯಲ್ಲಿ, ಅಗ್ನಿಶಾಮಕ ತಂಡಗಳನ್ನು ಕಳುಹಿಸಲು ಸಿಬ್ಬಂದಿಗಳ ಕೊರತೆಯೂ ಒಂದು ಸವಾಲಾಗಿದೆ.
 • ದಟ್ಟ ಕಾಡುಗಳ ಮೂಲಕ ಅರಣ್ಯ ಸಿಬ್ಬಂದಿ, ಇಂಧನ ಮತ್ತು ಉಪಕರಣಗಳನ್ನು ಸಮಯೋಚಿತವಾಗಿ ತಲುಪಿಸುವುದು ‘ಬೆಂಕಿಯ ಪ್ರಕಾರ’ವನ್ನು ಅವಲಂಬಿಸಿರುತ್ತದೆ ಹಾಗಾಗಿ ಇದು ಅಗ್ನಿಶಾಮಕ ಪ್ರಯತ್ನಗಳಿಗೆ ಒಂದು ಸವಾಲಾಗಿದೆ.
 • ದಟ್ಟ ಕಾಡುಗಳಲ್ಲಿ ನೀರು ತುಂಬಿದ, ಭಾರವಾದ ವಾಹನಗಳನ್ನು ಸಾಗಿಸುವುದು ಅಸಾಧ್ಯವಾದ್ದರಿಂದ, ಬ್ಲೋವರ್‌ಗಳು ಮತ್ತು ಅಂತಹುದೇ ಸಾಧನಗಳನ್ನು ಬಳಸಿ ಬಹುಪಾಲು ಬೆಂಕಿಯನ್ನು ನಂದಿಸುವುದನ್ನು ಅರಣ್ಯ ಸಿಬ್ಬಂದಿಯ ಕೈಯಾರೆ ಪ್ರಾರಂಭಿಸಲಾಗುತ್ತದೆ.
 • ಕಾಡಿನ ಬೆಂಕಿಯನ್ನು ನಿಯಂತ್ರಿಸುವಲ್ಲಿ ಗಾಳಿಯ ವೇಗ ಮತ್ತು ದಿಕ್ಕು ಪ್ರಮುಖ ಪಾತ್ರ ವಹಿಸುತ್ತದೆ. ವಿಶೇಷವಾಗಿ, ಬೆಂಕಿಯು ಗಾಳಿಯ ದಿಕ್ಕಿನಲ್ಲಿ ಮತ್ತು ಎತ್ತರದ ಕಡೆಗೆ ಹರಡುತ್ತದೆ.

ಅರಣ್ಯಗಳನ್ನು ಕಾಡ್ಗಿಚ್ಚಿನಿಂದ ರಕ್ಷಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ?

 • 2004 ರಿಂದ, ಕಾಡಿನ ಬೆಂಕಿಯನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ(monitor forest fire in real time) ಮಾಡಲು ‘ಫಾರೆಸ್ಟ್ ಫೈರ್ ಅಲರ್ಟ್ ಸಿಸ್ಟಮ್’ ಅನ್ನು ಫಾರೆಸ್ಟ್ ಸರ್ವೆ ಆಫ್ ಇಂಡಿಯಾ (FSI) ಅಭಿವೃದ್ಧಿಪಡಿಸಿದೆ.
 • 2019ರ ಜನವರಿ ಯಲ್ಲಿ ಇದರ ಸುಧಾರಿತ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು, ಇದರ ಅಡಿಯಲ್ಲಿ, ಈ ವ್ಯವಸ್ಥೆಯು ಈಗ ನಾಸಾ ಮತ್ತು ಇಸ್ರೋ ಉಪಗ್ರಹದ ಮೂಲಕ ಸಂಗ್ರಹಿಸಿದ ಮಾಹಿತಿಯನ್ನು ಬಳಸುತ್ತದೆ.
 • ಗುರುತಿಸಲಾದ ಅಗ್ನಿಶಾಮಕ ಹಾಟ್‌ಸ್ಪಾಟ್‌ಗಳಿಂದ ‘ನೈಜ ಸಮಯದ ಅಗ್ನಿಶಾಮಕ ಮಾಹಿತಿಯನ್ನು’ ಮೊಡಿಸ್ ಸಂವೇದಕ (MODIS sensors)(1 ಕಿಮೀ ಗ್ರಿಡ್ ನಿಂದ 1 ಕಿ. ಮೀ.) ಮೂಲಕ ಸಂಗ್ರಹಿಸಿ ವಿದ್ಯುನ್ಮಾನವಾಗಿ ‘ಫಾರೆಸ್ಟ್ ಸರ್ವೆ ಆಫ್ ಇಂಡಿಯಾ’ಕ್ಕೆ ರವಾನಿಸಲಾಗುತ್ತದೆ.

 

ವಿಷಯಗಳು: ಸಂವಹನ ನೆಟ್‌ವರ್ಕ್‌ಗಳ ಮೂಲಕ ಆಂತರಿಕ ಭದ್ರತೆಗೆ ಸವಾಲುಗಳು, ಆಂತರಿಕ ಭದ್ರತಾ ಸವಾಲುಗಳಲ್ಲಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪಾತ್ರ, ಸೈಬರ್ ಸುರಕ್ಷತೆಯ ಮೂಲಗಳು; ಹಣ ವರ್ಗಾವಣೆ ಮತ್ತು ಅದರ ತಡೆಗಟ್ಟುವಿಕೆ.

ಚೀನಾದ ಡಿಜಿಟಲ್ ಕರೆನ್ಸಿ:

(China’s digital currency)

 ಸಂದರ್ಭ:

ಚೀನಾ,ತನ್ನ ಹೊಸ ಡಿಜಿಟಲ್ ಕರೆನ್ಸಿಯ ಇತ್ತೀಚಿನ ಸುತ್ತಿನ ಪ್ರಾಯೋಗಿಕ ಪ್ರಯೋಗಗಳನ್ನು ಫೆಬ್ರವರಿಯಲ್ಲಿ ಪ್ರಾರಂಭಿಸಿದೆ. ವರದಿಗಳ ಪ್ರಕಾರ, ಚೀನಾ ಈ ಹೊಸ ಡಿಜಿಟಲ್ ಕರೆನ್ಸಿಯನ್ನು ಈ ವರ್ಷದ ಅಂತ್ಯದ ವೇಳೆಗೆ ಮತ್ತು ಫೆಬ್ರವರಿ 2022 ರಲ್ಲಿ  ಬೀಜಿಂಗ್ ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ಗೆ ಮುಂಚಿತವಾಗಿ ದೊಡ್ಡ ಪ್ರಮಾಣದಲ್ಲಿ ಬಿಡುಗಡೆ ಮಾಡಲು ಯೋಜಿಸಿದೆ.

ಚೀನಾದ ಡಿಜಿಟಲ್ ಕರೆನ್ಸಿಯು ಹೇಗೆ ಕಾರ್ಯನಿರ್ವಹಿಸುತ್ತದೆ?

 ಅಧಿಕೃತವಾಗಿ ‘ಡಿಜಿಟಲ್ ಕರೆನ್ಸಿ ಎಲೆಕ್ಟ್ರಾನಿಕ್ ಪಾವತಿ’ (DCEP) ಎಂದು ಘೋಷಿಸಲಾಗಿದೆ, ಡಿಜಿಟಲ್ ಆರ್ ಎಂ ಬಿ (ಅಥವಾ ರೆನ್ಮಿನ್ಬಿ, ಚೀನಾದ ಕರೆನ್ಸಿ) ಚೀನಾದ ಕರೆನ್ಸಿಯ ಡಿಜಿಟಲ್ ಆವೃತ್ತಿಯಾಗಿದೆ. ಚೀನಾದ ಕರೆನ್ಸಿಯನ್ನು Renminbi ಅಥವಾ RMB ಎಂದು ಕರೆಯಲಾಗುತ್ತದೆ. ಇದನ್ನು ಚೀನಾದ ಸೆಂಟ್ರಲ್ ಬ್ಯಾಂಕ್ ಆದ, ಪೀಪಲ್ಸ್ ಬ್ಯಾಂಕ್ ಆಫ್ ಚೀನಾ (PBOC) ಅನುಮೋದಿಸಿರುವ ಅಧಿಕೃತ ‘ಅಪ್ಲಿಕೇಶನ್’ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ವಿನಿಮಯ ಮಾಡಿಕೊಳ್ಳಬಹುದು.

ಡಿಜಿಟಲ್ ಕರೆನ್ಸಿಯ ಪ್ರಮುಖ ಲಕ್ಷಣಗಳು:

 • ಇದು ಸೆಂಟ್ರಲ್ ಬ್ಯಾಂಕ್‌ನಿಂದ ಖಾತ್ರಿಪಡಿಸಿದ ಕಾನೂನು ಟೆಂಡರ್’ ಆಗಿದೆ, ಇದು ಮೂರನೇ ವ್ಯಕ್ತಿ ಆಪರೇಟರ್ ಖಾತರಿಪಡಿಸಿದ ಪಾವತಿಯಲ್ಲ.
 • ಯಾವುದೇ ಮೂರನೇ ವ್ಯಕ್ತಿಯ ಮೂಲಕ ವಹಿವಾಟು ನಡೆಯುವುದಿಲ್ಲ, ಆದ್ದರಿಂದ, ಇದು ಯಾವುದೇ ವಹಿವಾಟು ಶುಲ್ಕವನ್ನು ಹೊಂದಿರುವುದಿಲ್ಲ.
 • ಇ-ವ್ಯಾಲೆಟ್‌ಗಳಂತಲ್ಲದೆ, ಡಿಜಿಟಲ್ ಕರೆನ್ಸಿಗೆ ಇಂಟರ್ನೆಟ್ ಸಂಪರ್ಕ ಅಗತ್ಯವಿಲ್ಲ. ಇದನ್ನು ನಿಯರ್-ಫೀಲ್ಡ್ ಕಮ್ಯುನಿಕೇಷನ್’ (NFC) ತಂತ್ರಜ್ಞಾನದ ಮೂಲಕ ಪಾವತಿಸಲಾಗುತ್ತದೆ.
 • ಬಳಕೆದಾರರು ತಮ್ಮ ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡುವ ಅಗತ್ಯವಿರುವ ಬ್ಯಾಂಕೇತರ ಪಾವತಿ ಪ್ಲಾಟ್‌ಫಾರ್ಮ್‌ಗಳಂತಲ್ಲದೆ, ಡಿಜಿಟಲ್ ಕರೆನ್ಸಿ’ ಸಂಬಂಧಿತ ಖಾತೆಗಳನ್ನು ‘ವೈಯಕ್ತಿಕ ಗುರುತಿನ ಸಂಖ್ಯೆ’ ಯೊಂದಿಗೆ ತೆರೆಯಬಹುದು.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಚೆನಾಬ್ ಸೇತುವೆ: ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ:

 

 • ‘ಚೆನಾಬ್ ಸೇತುವೆಯ ಕಮಾನು ಗೋಡೆಯ’ (ಕಮಾನು ನಿರ್ಮಾಣ) ನಿರ್ಮಾಣವನ್ನು ಭಾರತೀಯ ರೈಲ್ವೆ ಪೂರ್ಣಗೊಳಿಸಿದೆ.
 • ಚೆನಾಬ್ ಸೇತುವೆ ‘ಉಧಂಪುರ್-ಶ್ರೀನಗರ-ಬಾರಾಮುಲ್ಲಾ’ ರೈಲು ಸಂಪರ್ಕ ಯೋಜನೆಯ (USBRL) ಭಾಗವಾಗಿದೆ.
 • ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ರೈಲ್ವೆ ನಿರ್ಮಿಸಿದ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಇದಾಗಿದೆ.
 • ಚೆನಾಬ್ ಸೇತುವೆ 1,315 ಮೀಟರ್ ಉದ್ದವನ್ನು ಹೊಂದಿರುತ್ತದೆ.
 • ಇದು ನದಿ ಹಾಸಿಗೆಯ ಮಟ್ಟಕ್ಕಿಂತ 359 ಮೀಟರ್ ಎತ್ತರದಲ್ಲಿದೆ. ಈ ಸೇತುವೆ ಪ್ಯಾರಿಸ್‌ನ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರದಲ್ಲಿದೆ.
 • ಗಂಟೆಗೆ 266 ಕಿಲೋಮೀಟರ್ ವೇಗದಲ್ಲಿ ಬೀಸುವ ಗಾಳಿ ಮತ್ತು ಹೆಚ್ಚಿನ ತೀವ್ರತೆಯ ಭೂಕಂಪವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಈ ಸೇತುವೆ ಹೊಂದಿದೆ.

ಲಾ ಪ್ರೌಸ (LA PEROUSE):

 • ಇದು ಬಹುಪಕ್ಷೀಯ ಕಡಲ ಸಮರಾಭ್ಯಾಸ ವಾಗಿದ್ದು, ಈ ವರ್ಷ ಪೂರ್ವ ಹಿಂದೂ ಮಹಾಸಾಗರ ಪ್ರದೇಶದಲ್ಲಿ ನಡೆಸಲಾಗುತ್ತಿದೆ.
 • ಇದರ ನೇತೃತ್ವವನ್ನು ಫ್ರೆಂಚ್ ನೌಕಾಪಡೆ ವಹಿಸುತ್ತದೆ.
 • ಈ ನೌಕಾ ಸಮರಾಭ್ಯಾಸದಲ್ಲಿ ಭಾರತ ಭಾಗವಹಿಸುತ್ತಿದೆ.

ಅಂತರರಾಷ್ಟ್ರೀಯ ವರ್ಚುವಲ್ ಚುನಾವಣಾ ಸಂದರ್ಶಕರ/ ವೀಕ್ಷಕರ ಕಾರ್ಯಕ್ರಮ (IVEP) 2021:

(International Virtual Election Visitors Programme (IVEP) 2021)

 •  ಇತ್ತೀಚೆಗೆ, ಅಂತರರಾಷ್ಟ್ರೀಯ ವರ್ಚುವಲ್ ಚುನಾವಣಾ ಸಂದರ್ಶಕರ ಕಾರ್ಯಕ್ರಮ 2021 ಅನ್ನು ಭಾರತದ ಚುನಾವಣಾ ಆಯೋಗ ಆಯೋಜಿಸಿತ್ತು.
 • 26 ದೇಶಗಳ ಚುನಾವಣಾ ನಿರ್ವಹಣಾ ಸಂಸ್ಥೆಗಳು (EMB) ಮತ್ತು ಮೂರು ಅಂತರರಾಷ್ಟ್ರೀಯ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.
 • IEVP 2021, ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಭಾರತೀಯ ಚುನಾವಣಾ ಪ್ರಕ್ರಿಯೆಯ ವಿಶಾಲ ಸನ್ನಿವೇಶ, ಮತದಾರರ ಅನುಕೂಲಕ್ಕಾಗಿ ECI ಕೈಗೊಂಡ ಕ್ರಮಗಳು, ಚುನಾವಣಾ ವ್ಯವಸ್ಥೆಯ ಪಾರದರ್ಶಕತೆ ಮತ್ತು ಪ್ರವೇಶ, ತರಬೇತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವ ಅಗತ್ಯತೆಗಳ ಕುರಿತು ಅವಲೋಕನಗಳನ್ನು ಪ್ರಸ್ತುತಪಡಿಸುತ್ತದೆ.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos